ಕೋಟೆ

ಬೀದರಿಗೆ ಬಂದು ಮೂರು ದಿನವಾಗಿದ್ದರೂ ಕೋಟೆಗೆ ಹೋಗಲು ಸಾಧ್ಯವಾಗಿರಲೇ ಇಲ್ಲಾ. ಗೊಷ್ಠಿಯಲ್ಲಿ ಪ್ರಬಂಧ ಮಂಡಿಸಿದ ಮೇಲೆ ಒತ್ತಡ
ಕಡಿಮೆಯಾಗಿತ್ತು. ಹಾಗಾಗಿ ಕೋಟೆಯ ಸೆಳೆತ ಹೆಚ್ಚಾಯಿತು. ಕೋಟೆ ಊರಿನ ತುದಿಗಿತ್ತು. ಆಟೋವೊಂದನ್ನು ನಿಲ್ಲಿಸಿ ಕೋಟೆಗೆ ಎಂದಾಗ ಆಟೋದವ ಹುಬ್ಬೇರಿಸಿದ. ತಾನು
ಒಬ್ಬಳೇ ಎಂದು ಅವನಿಗೆ ಅಚ್ಚರಿಯೆನಿಸಿತ್ತೇನೋ. ಅದು ಅವನ ಗಮನಕ್ಕೆ ಬಂದರೂ ನಿರ್ಲಕ್ಷಿಸಿ ಆಟೋ ಹತ್ತಿದಳು. ಆಟೋದವನ ಉರ್ದು ಮಿಶ್ರಿತ ಕನ್ನಡ
ಅರ್ಥವಾಗದಿದ್ದರೂ ಹ್ಹೂ ಎಂದಿದ್ದಳು. ಆಟೋ ದೊಡ್ಡ ರಸ್ತೆಯಲ್ಲಿ ಸಾಗುತ್ತಿತ್ತು. ಬೀದರಿನ ರಸ್ತೆಗಳೆಲ್ಲಾ ಎಷ್ಟೊಂದು ದೊಡ್ಡದು. ತಾನು ನೋಡಿದ್ದ ನಾಲ್ಕು ರಸ್ತೆಗಳೂ ದೊದ್ದದಾಗಿದ್ದವು. ಹೋಟಲಿನಿಂದ ಸಮ್ಮೇಳನ ನಡೆಯುವ ಕಾಲೇಜು ರಸ್ತೆ, ಸಂಜೆ ಸುತ್ತಾಡಲೂ ಹೊರಟಿದ್ದ ಪೇಟೆಯ ರಸ್ತೆ, ಅಬ್ಬಾ ರಸ್ತೆಗಳೆಲ್ಲ ಅದೆಷ್ಟು ದೊಡ್ಡವಾಗಿವೆ, ಅಂದುಕೊಳ್ಳುತ್ತಿರುವಾಗಲೇ ಆಟೋ ಗಕ್ಕನೇ ಸಣ್ಣ ರಸ್ತೆಗಿಳಿಯಿತು. ಓಣಿಯಂತಹ ರಸ್ತೆ ಸಣ್ಣ ಸಣ್ಣ ಮಿತಿಗಳು “ಓಲ್ಡ್ ಬೀದರ್ ಹೈ” ಎಂದ ಆಟೋದವ.

ಓಹ್ ತಾನು ನೋಡಿದ್ದು ಹೊಸ ಬೀದರ್, ಇದು ಹಳೇ ಬೀದರ್, ಬೀದರ್ ಪೂರ್ತಿ ದೊಡ್ಡ ದೊಡ್ಡ ರಸ್ತೆಗಳ ನಗರ ಎಂದುಕೊಂಡ ತನ್ನ ಅಜ್ಞಾನಕ್ಕೆ ತಾನೇ ನಕ್ಕಳು.
ತನ್ನ ನಗು ಆಟೋದವನಿಗೆ ವಿಸ್ಮಯ ತರಿಸಿರಬೇಕು. ಹಿಂದೆ ತಿರುಗಿ ನೋಡಿ ತಾನೂ ನಕ್ಕಿದ್ದ, ಕಣ್ಣಿನಲ್ಲಿ ಬೆರಗು ಮೂಡಿಸುತ್ತ.

“ಮೇಮ್ ಸಾಬ್, ಎ ಕೋಟೆ ಬಹುತ್ ಬಡಾ ಹೈ, ಆಪ್ ಅಕೇಲೆ ಹೋ, ಡರನೆ ಕೀ ಕೋಯಿ ಬಾತ ನಹಿ, ಸಮ್ಮೇಳನಕ್ಕೆ ಬಂದವರೆಲ್ಲ ಇಲ್ಲಿಗೆಲ್ಲಾ ಬಂದಿದಾರೆ,” ತನ್ನ
ಉರ್ದು, ಕನ್ನಡ ಭಾಷೆಯಲ್ಲಿ ಮಾತನಾಡುತ್ತಾ ತನ್ನನ್ನು ಮಾತಿಗೆ ಎಳೆಯಲು ಯತ್ನಿಸಿದ. ಅವನ ಯಾವ ಮಾತಿಗೂ ಉತ್ತರಿಸದೆ ಆಚೀಚೆ ಕಾಣುವ ದೃಶ್ಯದಲ್ಲಿ ತಲ್ಲೀನಳಾದಳು.

ಕೋಟೆಯ ಬೃಹದಾಕಾರದ ಬಾಗಿಲು ದಾಟಿ ತಿರುವಿನಲ್ಲಿ ಬರ್ರನೇ ನುಗ್ಗಿದ ಆಟೋವನ್ನು ಮತ್ತೊಂದು ಬಾಗಿಲ ಬಳಿ ನಿಲ್ಲಿಸಿ “ಹೋಗಿ ಮೇಮ್ ಸಾಬ್, ಕೋಟೆನೆಲ್ಲ
ನೋಡ್ಕೊಂಡು ಬನ್ನಿ, ನಾನು ಇಲ್ಲೇ ಕಾಯ್ತಾ ಇತಿನಿ” ಎಂದ ಆಟೋದವ.

ಆಟೋ ಇಳಿದು ಒಂಟಿಯಾಗಿಯೇ ಒಳ ಹೊಕ್ಕು ಸುತ್ತಲು ನೋಡಿದಳು. ಅಲ್ಲಲ್ಲಿ ಜನರು ಓಡಾಡುತ್ತಿರುವುದನ್ನು ಕಂಡು ಸಮಾಧಾನದಿಂದ ಮುಂದೆ ನಡೆದಳು. ಹತ್ತು
ವರ್ಷವಾಗಿತ್ತಲ್ಲವೇ ತಾನಿಲ್ಲಿಗೆ ಬಂದು. ಆಗ ಅಭಿಜ್ಞ ಜೊತೆಗಿದ್ದ. ಬರೀ ಹುಡುಗಾಟ ಅವನದು. ಅವನಿಗೆ ತನ್ನ ಮೇಲಿನ ಪ್ರೇಮ ಎಷ್ಟು ಎಂಬುದರ ಅರಿವಿದ್ದರೂ ಅರಿಯದಂತಿದೆ. ತನ ಪ್ರೀತಿಯನ್ನು ಗೆಲ್ಲುವ ಹಟದಲಿ ಪ್ರತಿ ಬಾರಿಯೂ ಸೋಲುತ್ತಿದ್ದ ಈ ಬಾರಿ ಗೆದ್ದೆ ಗೆಲ್ಲುವೆನೆಂಬ ಆತ್ಮವಿಶ್ವಾಸದಿಂದಲೇ ತನ್ನ ಬೆನ್ನು ಹತ್ತಿದ್ದ. ಬೀದರಿನಲ್ಲಿ ಕಾವ್ಯ ಕಮ್ಮಟವಿದ್ದು ಕಾಲೇಜಿನಿಂದ ನನ್ನನ್ನು ಆರಿಸಿ ಕಳಿಸುವಾಗ, ಅಭಿಜ್ಞ ಲೆಕ್ಚರ್‌ಗಳೊಂದಿಗೆ ಜಗಳ ಕಾದು ಕಮ್ಮಟಕ್ಕೆ ಹೊರಟಿದ್ದು ತನ್ನ ಗಮನಕ್ಕೂ ಬಂದಿತ್ತು “ಅಲ್ಲವೋ ಅಭಿಜ್ಞ, ಒಂದು ಸಾಲು ಕವಿತೆ ಬರೆಯೋಕೆ ಬರಲ್ಲ, ನಿಂಗ್ಯಾಕೋ ಈ ಕಾವ್ಯ
ಕಮ್ಮಟ” ಹಂಗಿಸಿದ್ದೆ.

“ನೋಡು ಬರೆಯೋಕೆ ಬರಲ್ಲ ಅಂತ ಮಾತ್ರ ಹೇಳಬೇಡ, ಕಮ್ಮಟ ಮುಗಿಯಲಿ, ನಾನು ಹೇಗೆ ಕವಿತೆ ಬರೀತೀನಿ ಅಂತ ನಿಂಗೆ ಗೊತ್ತಾಗುತ್ತೆ, ಮಹಾ ಇವಳೇ  ಬರೆಯೋಳು” ಅಂದಿದ್ದನ್ನು ಕೇಳಿ ಮನಸಾರೆ ನಕ್ಕಿದ್ದೆ. ನನ್ನ ಅಪಹಾಸ್ಯ ಅವನನ್ನು ಕೆರಳಿಸಿತೇನೋ, ಕಮ್ಮಟದಲ್ಲಿ ಕವಿತೆ ರಚಿಸಿ ಎಲ್ಲರ ಗಮನ ಸೆಳೆದಿದ್ದ.

“ಕೋಟೆ ನೋಡಿ ಬರೋಣ ಬಾ” ಎಂದು ಹೆಚ್ಚು ಕಡಿಮೆ ಎಳೆದುಕೊಂಡೇ ಬಂದಿದ್ದ. ಅದಕ್ಕೆ ಯಾವ ವಿಶೇಷವನ್ನು ಹುಡುಕದೆ ಅವನ ಹಿಂದೆ ಬಂದಿದ್ದೆ. ಇಬ್ಬರೇ ಆಟೋ
ಹತ್ತಿ ಕೋಟೆಯೊಳಗೆ ಬಂದಿದ್ದೆವು. ಹೆಬ್ಬಾಗಿಲು ದಾಟಿ ಒಳ ಬಂದರೆ ಕಂಡದ್ದೇ ಕಾರಂಜಿ, ಕಾರಂಜಿಯ ಸುತ್ತಲೂ ಕಟ್ಟಿದ ಚೌಕಾಕಾರದ ಕಟ್ಟೆ. ಕಟ್ಟೆ ಮೇಲೆ ಸ್ವಲ್ಪ ಹೊತ್ತು ಕುಳಿತೆವು. ಸುತ್ತಲೂ ಹಸಿರು ಲಾನು, ಚಿತ್ತಾಕರ್ಷಿತವಾಗಿ ಬೆಳೆಸಿದ ಹಳದಿಗಿಡಗಳ ಕಟಿಂಗ್‌ಗಳು, ಉದ್ದಕ್ಕೆ ಚೂಪಾಗಿ ಬೆಳೆಸಿದ ಮರಗಳ ಸಾಲು, ನೋಡುತ್ತಾ ನೋಡುತ್ತಾ ಮನಕ್ಕೆ ಹಾಯ್ ಎನಿಸಿತು. ಎದುರಿಗೆ ಕಾಣಿಸುತ್ತಿದ್ದುದೇ ಪಾಳು ಬಿದ್ದ ಕಟ್ಟಡ. ಬಲಭಾಗದಲ್ಲಿ ಗೋಳಗುಮ್ಮಟವಿದ್ದ ೧೧೫ ಬಾಗಿಲುಗಳ ಕಮಾನು ಇರುವ ದೊಡ್ಡ ಕಟ್ಟಡ, ಯಾವ ರಾಣಿಯ ಅಂತಃಪುರವೊ, ಇತಿಹಾಸದ ಅವಶೇಷವಾಗಿದ್ದ ಈ ತಾಣ ಏನೇನೋ ಕಥೆಗಳನ್ನು ಕಲ್ಪಿಸಿ ಹೇಳುವಂತಿತ್ತು. ಎಡಭಾಗದಲ್ಲಿದ್ದ ಮತ್ತೊಂದು ಕಟ್ಟಡ, ಎರಡು ಅಂತಸ್ತು ಕಾಣಿಸುತ್ತಿತ್ತು. ಅಲ್ಲಿಯೂ ಕಮಾನಿನಂತೆ ಬಾಗಿಲುಗಳ ಬಾಲ್ಕನಿ, ಅಬ್ಬಾ ಎಷ್ಟು
ಸುಂದರವಾಗಿದೆ ಎಂದುಕೊಂಡರು. ಕೋಟೆಯ ಇತಿಹಾಸ ತಿಳಿಯೋಣವೆಂದರೆ ಅಲ್ಲಿ ಯಾವ ಗೈಡ್‌ಗಳೂ ಕಂಡಿರಲಿಲ್ಲ. ಎದ್ದು ಕೋಟೆಯ ಸುತ್ತ ಒಂದು ಸಾರಿ ಸುತ್ತಿದರು ಸುತ್ತಿ ಸಾಕಾಗಿ ಮೂಜಿಯಂ ಕಟ್ಟಡವನ್ನು ಹೊಕ್ಕು ಎಲ್ಲವನ್ನು ನೋಡಿ ಹೊರ ಬಂದವರೇ ಅದೇ ಆವರಣದಲ್ಲಿದ್ದ ಮರಗಳ ಕೆಳಗೆ ಉಸ್ಸೆಂದು ಕುಳಿತರು. ಇನ್ನು ನಡೆಯಲು ಅಸಾಧ್ಯವೆಂಬಂತೆ.

“ರಾಗ ನಿನ್ನ ಯಾಕೆ ಇಲ್ಲಿಗೆ ಕರ್ಕೊಂಡು ಬಂದೆ ಅಂತ ಗೊತ್ತಾ” ಅಭಿಜ್ಞಾ ಗಂಭೀರವಾಗಿದ್ದ.

“ಇನ್ಯಾಕೆ, ಕೋಟೆ ನೋಡೋಕೆ” ತಟ್ಟನೆ ಹೇಳಿದ್ದೆ.

“ಅಯ್ಯೋ, ಕೋಟೆ ನೋಡೋಕೆ ಇಬ್ಬರೇ ಬರಬೇಕಾಗಿರಲಿಲ್ಲ, ಎಲ್ಲರ ಜೊತೆಯಲ್ಲಿಯೇ ಬರಬಹುದಿತ್ತು” ಅದೇ ಗಂಭೀರ ಸ್ವರ. ಅವನ ಗಂಭೀರತೆ ತಮಾಷೆ
ಎನಿಸಿ ‘ಅಭಿ ನಿಂಗೆ ಈ ಸೀರಿಯಸ್ನೆಸ್ ಸೂಟ್ ಆಗಲ್ಲ. ಇಷ್ಟೊಂದು ಸೀರಿಯಸ್’ ಆಗಬೇಡ, ನಕ್ಕಿದ್ದೆ.

ಅಂದ್ರೆ ನಾನು ಯಾವಾಗಲೂ ‘ಕೋತಿತರ ಆಡ್ತಾ ಇರಬೇಕಾ, ಒಮ್ಮೆಲೆ ರೇಗಿದ್ದ’.

ಸ್ವಲ್ಪ ಹೊತ್ತು ಸುಮ್ಮನಿದ್ದ ಅಭಿಜ್ಞಾ ತಟ್ಟನೆ “ರಾಗ ನಾವಿಬ್ರೂ ಮದ್ವೆ ಆಗೋಣ್ವ” ಕೇಳಿದ್ದ.

ಇದನ್ನು ನಿರೀಕ್ಷಿಸಿರದಿದ್ದ ನನಗೆ ಶಾಕ್ ಆಗಿತ್ತು. ಆ ಕ್ಷಣ ಏನೂ ಹೇಳದೆ ತಡಬಡಾಯಿಸಿದ್ದೆ. ಈ ರೀತಿಯ ನೇರಪ್ರಶ್ನೆ ನನ್ನೆದುರು ನಿಲ್ಲಬಹುದೆಂಬ ಯಾವ ಕಲ್ಪನೆಯೂ ಇಲ್ಲದೆ ನನಗೆ ಆಘಾತವಾಗಿತ್ತು. ಏನೊಂದು ಹೇಳಲಾರದೆ ಮೌನದ ಮೊರೆ ಹೊಕ್ಕಿದ್ದೆ.

“ರಾಗ ಮಾತಾಡೇ, ಏನಾದ್ರು ಹೇಳೆ” ದುಗುಡಗೊಂಡಿದ್ದ ಅಭಿ ಹೆಚ್ಚು ಕಡಿಮೆ ಯಾಚಿಸಿದ್ದ.

ನಿಧಾನವಾಗಿ ಚೇತರಿಸಿಕೊಂಡಿದ್ದ ನಾನು ಪದಗಳನ್ನೂ ತೂಗಿ ಆಡಿದ್ದೆ. “ಏನು ಹೇಳಲಿ ಅಭಿ, ಈ ಮದ್ವೆ ಪ್ರೀತಿ, ಪ್ರೇಮ, ಇದ್ಯಾವುದರಲ್ಲೂ ನಂಗೆ ನಂಬಿಕೆ ಇಲ್ಲಾ, ಆಸಕ್ತಿನೂ ಇಲ್ಲಾ, ನನ್ನ ಕ್ಷಮ್ಸು ಅಭಿ.”

“ಅಂದ್ರೆ ಮುಂದೆ ಯಾವಾಗ್ಲೂ ಆಸಕ್ತಿ ಬರೋದೇ ಇಲ್ವಾ” ನಿರಾಶೆ ಆ ಧ್ವನಿಯಲ್ಲಿ ಮೆತ್ತಿಕೊಂಡಿತ್ತು. ಆ ನಿರಾಶೆಗೆ ಆಸೆಯ ಬೆಳಕು ತುಂಬುವ ಚೈತನ್ಯವಿಲ್ಲದ ನಾನು
ತಲೆತಗ್ಗಿಸಿ ಸುಮ್ಮನೆ ಕುಳಿತಿದ್ದೆ.

“ರಾಗ, ಇದೇ ನಿನ್ನ ಕೊನೆ ತೀರ್ಮಾನನಾ, ನನ್ನ ಬಗ್ಗೆ ನಿಂಗೆ ಯಾವ ಭಾವನೆಗಳೂ ಇಲ್ವಾ, ರಾಗ ಮಾತಾಡು, ಇಷ್ಟೊಂದು ಕಠಿಣಳಾಗಬೇಡ” ಬೇಡಿದ್ದ, ಕಾಡಿದ್ದ, ರೇಗಿದ್ದ, ಕೊನೆಗೆ ರೋಸಿ ಸರ್ರನೆ ಎದ್ದು ಕಾಲಪ್ಪಳಿಸುತ್ತ ದಡದಡನೇ ಹೊರಟೇ ಹೋಗಿದ್ದ.

ಅದೇ ಕೊನೆ ಮತ್ತವನ ಕಂಡಿರಲೇ ಇಲ್ಲಾ. ಇಡೀ ಕೋಟೆ ಹುಡುಕಿ ಅಭಿ ಎಲ್ಲೂ ಕಾಣದಾದಾಗ ಒಬ್ಬಳೇ ಕೋಟೆಯಿಂದ ಹೊರಬಿದ್ದೆ. ಮನಸ್ಸು ಕಲ್ಲಿನಂತೆ ಭಾರವಾಗಿತ್ತು. ಮನದಲ್ಲಿನ ಭಾವ ಕೋಟೆಯಂತೆ ಅಭೇದ್ಯವಾಗಿತ್ತು. ಅಂದೇ ಅಭಿ ತನ್ನ ಬ್ಯಾಗ್ ತೆಗೆದುಕೊಂಡು ಹೊರಟು ಹೋದನೆಂದು ತಿಳಿಯಿತು. ಮತ್ತವನು ಊರಿಗೆ ಬಂದ ಮೇಲೂ ಕಾಣಸಿಗಲಿಲ್ಲ. ಆ ನೋವು, ನೆನಪುಗಳಿಂದಾಚೆ ಹೊರಬರಲು ರಾಜಧಾನಿಯಲ್ಲಿ ಸಿಕ್ಕ ಉದ್ಯೋಗ ನೆವವಾಗಿತ್ತು. ಎಲ್ಲಾ ನೆನಪಾಗಿ ನಿಟ್ಟುಸಿರು ಹೊರಬಿದ್ದಿತು.

ನೆನಪುಗಳೊಂದಿಗೆ ನಡೆಯುತ್ತಿದ್ದವಳಿಗೆ ಕೋಟೆಯೊಳಗೆಲ್ಲ ಸುತ್ತಿದ್ದೇ ಗೊತ್ತಾಗಲಿಲ್ಲ. ಅಭಿಯೊಂದಿಗೆ ಕೊನೆ ಭೇಟಿಯಾದ ಜಾಗಕ್ಕೆ ಬಂದಾಗ ಕಣ್ತುಂಬಿ
ಬಂದಿತು. ಅದೇ ಜಾಗದಲ್ಲಿ ಕುಳಿತು ಬಾಲಿಗಿನಿಂದ ಕೆಂಪು ಗುಲಾಬಿಯೊಂದನ್ನು ತೆಗೆದು ಅಭಿ ಕುಳಿತಿದ್ದ ಜಾಗದಲ್ಲಿರಿಸಿದಳು. ಮನಸ್ಸು ಹಿತವಾಗಿ ನರಳಿತು.

“ರಾಗ, ರಾಗ ಓಡಬೇಡ್ವೆ, ನಿಂತ್ಕೊಳ್ಳೆ, ಪಪ್ಪನೂ ಬಲಿ”, ಯಾವುದೊ ಹೆಣ್ಣು ಧ್ವನಿ, ಗಕ್ಕನೆ ಅತ್ತ ತಿರುಗಿದಳು. ಮುದ್ದಾದ ಮಗುವೊಂದು ಇತ್ತಲೇ ಓಡಿ ಬಂತು. ‘ಅರೆ ರೆಡ್ರೋಸ್’ ಬಗ್ಗಿದವಳೇ ತೆಗೆದುಕೊಂಡು “ಮಮ್ಮಿ ನೋಡಿಲ್ಲಿ ಬ್ಯೂಟಿಪುಲ್ ರೋಸ್” ಕೂಗಿದಳು.

ಬಿಳಿ ಚೂಡಿದಾರಿನಲ್ಲಿ ಚೆಲುವಾದ ಯುವತಿಯೊಬ್ಬಳು, ಅವಳೊಟ್ಟಿಗೆ ಅವನು, ಕೋಲ್ಮಿಂಚು ಹೊಡೆದಂತಾಯ್ತು, ದಂಗು ಬಡಿದು ಹೋದಳು. ಅಭಿಜ್ಞಾ, ಅಭಿಜ್ಞಾ,
ಮನಸ್ಸು ಕೂಗಿ ಕರೆದರೂ ತುಟಿ ಆಡಿತೇ ವಿನಾ ಶಬ್ದ ಹೊರಬರಲಿಲ್ಲ. ಹೃದಯ ನವಿಲಿನಂತೆ ಕುಣಿಯುತ್ತಿದೆ ಎನಿಸಿ ಅದೆಲ್ಲಿ ಮೊಗದಲ್ಲಿ ಕಂಡು ಬಿಡುವುದೇನೋ ಎಂದು ಹೆದರಿದಳು.

ಅದೇ ಸಂಭ್ರಮ ಅಭಿಯ ಮೊಗದಲ್ಲಿ, ಯಾವುದೇ ಮುಚ್ಚುಮರೆ ಇಲ್ಲದೆ ಸಂಭ್ರಮಿಸುತ್ತಿದ್ದಾನೆ.

“ರಾಗ, ರಾಗ ನೀನು ಇಲ್ಲಿ” ಉದ್ವೇಗದಿಂದ ಕೂಗಿದ “ಅಂಬರ, ಇವಳು ರಾಗ, ನಾನು ಹೇಳಿದ್ದೆನಲ್ಲ ಅವಳೇ” ರಾಗಳತ್ತ ತಿರುಗಿ “ರಾಗ ಇವಳು ಅಂಬರ ನನ್ನ ಹೆಂಡತಿ, ಈ ತುಂಟಿ ಮಗಳು, ಹೆಸರು ನಿಂದೇ” ಬಡಬಡನೇ ಮಾತನಾಡಿದ.

ಅಂಬರ ನಸುನಗುತ್ತ ನಿಂತಿದ್ದಳು. “ಪಪ್ಪ ಆಂಟಿ ಇಲ್ಲಿ ಈ ರೋಸ್ ಇಡ್ತಾ ಇದ್ದರು, ಅದನ್ನು ನಾನು ತಗೊಂಡೆ”, ಪುಟ್ಟ ರಾಗ ಹೇಳ್ತಾ ಇದ್ದರೆ ಅಭಿಜ್ಞನ ಕಣ್ಣುಗಳು ಮಿನುಗಿದವು. ಅಷ್ಟೇ ಬೇಗ ಕಳಾಹೀನವಾಗಿ ಮೊಗ ಪೇಲವವಾಯಿತು ನೋವು ತುಂಬಿದ ನೋಟದಲ್ಲಿ ನೂರು ಪ್ರಶ್ನೆಗಳಿದ್ದವು. ಆ ಮೊಗ ಎದುರಿಸಲಾರದೆ “ಪುಟ್ಟಿ ಕೋಟೆನ್ನೆಲ್ಲ ನೋಡಿದ್ಯಾ, ಯಾವ ಕ್ಲಾಸ್ ನೀನು” ರಾಗಳನ್ನು ಹತ್ತಿರಕ್ಕೆಳೆದುಕೊಂಡಳು.

“ಈಗ ತಾನೇ ಈ ಸ್ಥಳ ತೋರಿಸಿದ್ರು ರಾಗ” ಅಂಬರ ಮೊಟ್ಟಮೊದಲನೆ ಮಾತಾಡಿದ್ದಳು. ಅಭಿ ಎಲ್ಲವನ್ನು ಹೇಳಿಬಿಟ್ಟಿದ್ದಾನೆಂದು ಊಹಿಸಿ ಸಂಕೋಚಿಸಿದಳು
ರಾಗ.

“ಎಂಥ ಕೋ ಇನ್ಸಿಡೆಂಟ್ ಅಲ್ವ ರಾಗ, ನೀನೂ ಬಂದಿದ್ದಿಯಾ, ನಾನೂ ಬಂದಿದ್ದೇನೆ, ಅದೂ ಹತ್ತು ವರ್ಷದ ಮೇಲೆ, ನೀನು ಒಬ್ಳೆ ಇಲ್ಲಿ ಹೇಗೆ?”

“ಇಲ್ಲಿ ಸಾಹಿತ್ಯ ಸಮ್ಮೇಳನ ನಡಿತಾ ಇದೆ, ನನ್ನದೊಂದು ಉಪನ್ಯಾಸ ಇತ್ತು. ಅಪ್ಪ ಅಮ್ಮಂಗೆ ವಯಸ್ಸಾಗಿದೆ, ಇಲ್ಲಿಗೆಲ್ಲ ಬರೋ ಶಕ್ತಿ ಇಲ್ಲಾ, ಅದಕ್ಕೆ ನಾನೂಬ್ಬಳೇ ಬಂದಿದ್ದೀನೆ.”

“ಅಂದ್ರೆ ನೀನಿನ್ನೂ ಒಂಟಿಯಾಗಿಯೇ ಇದ್ದೀಯಾ” ವಿಷಾದ, ನೋವು ಒತ್ತಿಕೊಂಡು ಬಂದು ಹತಾಶೆಯಲಿ ಬಳಲಿದ. ಅರ್ಥವಾಗಿ ಹೋಯಿತವಳಿಗೆ, ತಕ್ಷಣ
ಎಚ್ಚೆತ್ತುಕೊಂಡವಳೇ “ಯಾಕೋ ಅಭಿ” ಹೀಗೆ ಕೇಳ್ತಾ ಇದ್ದಿಯಲ್ಲ, ನಾನೆಲ್ಲಿ ಒಂಟಿ, ಅಪ್ಪ ಅಮ್ಮ ನನ್ನ ಜೊತೆಯಲ್ಲಿದ್ದಾರಲ್ಲ, ಅಭಿ ಗೊತ್ತಾ ನಿಂಗೆ ನಾನೀಗ ದೊಡ್ಡ ಲೇಖಕಿ, ಏಳು ಪುಸ್ತಕ ಬರೆದಿದ್ದೇನೆ. ಅದೆಷ್ಟು ಪ್ರಶಸ್ತಿಗಳು ಬಂದಿವೆ ಗೊತ್ತಾ”

ಅದಕ್ಕೆ ಅವನಿಂದಾವ ಪ್ರತಿಕ್ರಿಯೆಯೂ ಇಲ್ಲ. ಅಂಬರ ಅದನ್ನು ಅರಿತವಳಂತೆ “ರಾಗ ನೀವೆಲ್ಲಿ ಉಳ್ಕೊಂಡಿದಿರಾ?” ಪರಿಸ್ಥಿತಿಯನ್ನು ನಿಭಾಯಿಸಲೆತ್ನಿಸಿದಳು.

“ಸ್ಟಾರ್ ಹೋಟೆಲ್” “ಅರೆ, ನಾವು ಅದೇ ಹೋಟೆಲಿನಲ್ಲಿದ್ದೇವೆ. ಅಭಿ ಹೊರಡೋಣ್ವ” ಬಲವಂತವಾಗಿ ಎದ್ದು ನಿಂತವನಂತೆ ಎದ್ದು ನಡೆಯಲಾರಂಭಿಸಿದನು.
ಮನದೊಳಗಿನ ಹೋರಾಟವನ್ನು ಬಚ್ಚಿಡುವ ಶಕ್ತಿ ಸಾಲದೆ ಮೌನದ ಮೊರೆ ಹೊಕ್ಕಿದ್ದನು. ಅವನ ದೀನ ನೋಟ ನಿರ್ಜೀವವಾಗಿ ಸುಡುತ್ತಿರುವಂತೆ ಭಾಸವಾಗಿ ರಾಗ ಬೆವರಿದಳು. ಭಾವನೆಗಳೆಲ್ಲ ಆ ಕ್ಷಣಕ್ಕೆ ತಟಸ್ಥವೆನಿಸತೊಡಗಿತು. ಅಭಿಯ ನೋಟ ಭಾವಗಳು ಬೆನ್ನಿನ ಹುರಿ ಹಿಡಿದು ಜಗ್ಗಿದಂತಾಯ್ತು. ಎಂದೋ ಮನದಲ್ಲಿ ಕಡೆದಿಟ್ಟಿದ್ದ ನೆನಪುಗಳು, ಕನಸುಗಳನ್ನು ಮತ್ತೆ ಎರಕ ಹೊಯ್ದು ಈಗಾಗಲೇ ಪತಿಯಾಗಿ ತಂದೆಯಾಗಿ ಬದಲಾಗಿರುವ ಅಭಿ ತನ್ನ ಅಭಿಯಾಗಿ ಬದಲಾಗುವುದು ಬೇಡವಾಗಿತ್ತು. ಈ ಅಭಿ ನಂಗೆ ಸಿಗಲೇಬಾರದಿತ್ತು. ಅವನಷ್ಟಕ್ಕೆ ಅವನು ನನ್ನಷ್ಟಕ್ಕೆ ನಾನು ಹೇಗೋ ಇದ್ದೆವಲ್ಲ ಇಷ್ಟು ದಿನ.

ಒಂದೂ ಮಾತಾಡದೆ ಆಟೋ ಇಳಿದು ಅಭಿ ಅವನ ಪಾಡಿಗೆ ಅವನು ಮೆಟ್ಟಿಲೇರುತ್ತ ಹೋಗಿಯೇ ಬಿಟ್ಟಾ.

“ಸಾರಿ ರಾಗ, ಅಭಿ ಡಿಸ್ಟರ್ಬ್ ಆಗಿದ್ದಾರೆ, ಬೆಳಗ್ಗೆ ಹೊತ್ತಿಗೆ ಸರಿ ಹೋಗ್ತಾರೆ, ನಿಮ್ಮ ಮೂಡ್ ಹಾಳಾಗಿಲ್ಲ ತಾನೇ”, ಕ್ಷಮೆಯಾಚಿಸಿದಳು ಅಂಬರ.

“ನೋ, ನೋ ಹಾಗೇನು ಇಲ್ಲಾ, ನಾನು ಬರ್ತೀನಿ, ಬಾಯ್ ಚಿನ್ನು” ಎನ್ನುತ್ತ ನಿಧಾನವಾಗಿ ತನ್ನ ರೂಮಿನತ್ತ ಹೆಜ್ಜೆ ಹಾಕಿದಳು.

ಫ್ಯಾನ್‌ನನ್ನ ದಿಟ್ಟಿಸುತ್ತ ಮಲಗಿದ್ದ ಅಭಿಜ್ಞನಿಗೆ ಯಾವುದೋ ಅನುಬಂಧದ ಕೊಂಡಿ ಕಳಚಿದಂತಾಗಿ, ಅವನ ವಿಶ್ವಾಸವನ್ನು ಬುಡಮೇಲಾಗಿ ಅಲ್ಲಾಡಿಸಿತ್ತು. ರಾಗ ಒಂಟಿಯಾಗಿದ್ದಾಳೆ, ರಾಗ ಒಂಟಿ, ರೆಪ್ಪೆ ಮುಚ್ಚಲಾರದೆ ತಲ್ಲಣಿಸಿದ.

ಅವನ ಮನಸ್ಸು ಓದಿದವಳಂತೆ ಅಂಬರ ಒಂದೂ ಮಾತಾಡದೆ ಊಟವನ್ನು ರೂಮಿಗೆ ತರಿಸಿ ಮಗುವಿಗೆ ಊಟ ಮಾಡಿಸಿ ಮಲಗಿಸಿದಳು.

“ಅಭಿ ಎದ್ದೇಳಿ ಊಟ ಮಾಡಿ ಮಲಗಿಕೊಳ್ಳಿ” ಬಲವಂತಿಸಿದಳು. ಎರಡು ತುತ್ತು ತಿನ್ನಲಾಗಲಿಲ್ಲ ಅವನಿಗೆ, ತಟ್ಟೆಯಲ್ಲಿಯೇ ಕೈ ತೊಳೆದುಬಿಟ್ಟ. ನೋಡಿದರೂ ನೋಡದಂತೆ ಅಂಬರ ಊಟ ಮುಗಿಸಿ ಮಗುವಿನ ಪಕ್ಕ ಉರುಳಿಕೊಂಡಳು”.

ಮೊಬೈಲ್ ರಿಂಗಾದಾಗ ಅಭಿ ಯಾಂತ್ರಿಕವಾಗಿ ಕೈಗೆತ್ತಿಕೊಂಡ. “ಅಭಿ, ಮಲಗಿಲ್ಲವಾ, ನಂಗೊತ್ತು ನೀನು ಇವತ್ತು ನಿದ್ದೆ ಮಾಡಲ್ಲ ಅಂತ. ನಿನ್ನತ್ರ
ಮಾತಾಡಬೇಕು. ಅದಕ್ಕೆ ಅಂಬರ್‌ನತ್ರ ನಿನ್ನ ನಂಬರ್ ತಗೊಂಡೆ. ನಾನು ಟೆರೇಸ್ ಮೇಲಿದ್ದೀನಿ, ಅಲ್ಲಿಗೆ ಬಾ” ರಾಗಳ ಧ್ವನಿ ಕೇಳಿದೊಡನೆ ದಿಗ್ಗನೆದ್ದು ಶರಟು ಏರಿಸಿಕೊಂಡು ಬಾಗಿಲು ತೆಗೆದು ಹೊರನಡೆದು ಟೆರೇಸ್ ಏರಿದ.

ಬಾ ಅಭಿ, ನಿನ್ನ ಮನಸ್ಸು ನನಗರ್ಥವಾಗ್ತಾ ಇದೆ. ನನ್ನ ಅರ್ಥ ಮಾಡಿಕೊಳ್ಳೋಕೆ ಅಗದೆ ಒದ್ದಾಡ್ತಾ ಇದ್ದಿಯಾ ಅಲ್ವಾ. ನಿನ್ನ ಪ್ರೀತಿ ಬೇಡವೆಂದೆ, ನಿನ್ನೊಂದಿಗಿನ ಮದ್ವೆ ಬೇಡ ಅಂದೆ, ಆದ್ರೆ ನಿನ್ನ ನೆನಪಿನಲ್ಲೆ ಬದುಕ್ತಾ ಇದ್ದೀನಿ. ಯಾಕೆ ಅನ್ನೋ ಪ್ರಶ್ನೆ ಕಾಡ್ತಾ ಇದೆ ಅಲ್ವಾ. ಇವತ್ತು ಎಲ್ಲಾ ಹೇಳಿಬಿಡ್ತೀನಿ, ನನ್ನೆದೆಯ ಕೋಟೆಯೊಳಗೆ ಅಭೇಧ್ಯವಾಗಿದ್ದ ರಹಸ್ಯವನ್ನೆಲ್ಲ ತಿಳಿಸಿಬಿಡುತ್ತೇನೆ, ಕೇಳು ಅಭಿ ಕೇಳು.

ಹೆಣ್ತನ ಎಂದರೇನು ಅಂತ ಗೊತ್ತಾಗದೆ ಇರೋ ವಯಸ್ಸಿನಲ್ಲೇ ಕೆಟ್ಟ ಹುಳುಗಳಿಂದ ನನ್ನ ಹೆಣ್ತನ ಕಳ್ಕೊಂಡೆ. ನನ್ನ ಮೇಲಾದ ದಾಳಿಯಿಂದ ನನ್ನ ಯುಟ್ರಸ್‌ಗೆ ಡ್ಯಾಮೇಜಾಗಿ ನನ್ನ ಉಳಿಸಿಕೊಳ್ಳಲು ಅದನ್ನು ತೆಗೆದು ಸಾಯುವ ತನಕ ಕೀಳರಿಮೆಯಿಂದ ನರಳಿ ನರಳಿ ನರಕದಲ್ಲಿ ಬೇಯುವಂತೆ ಮಾಡಿದ್ರು. ಮದ್ವೆ, ಗಂಡ, ಮಕ್ಕಳು ಅನ್ನೋದು ನನಗೆ ಗಗನ ಕುಸುಮವಾಗಿತ್ತು. ಈಗೇಳು ನಾನು ಹೇಗೆ ನಿನ್ನ ಮದ್ವೆ ಆಗಲು ಒಪ್ಪಬಹುದಿತ್ತು. ನಿನ್ನನ್ನೇ ಅಲ್ಲಾ ಬೇರೆ ಯಾರನ್ನೂ ಮದ್ವೆ ಆಗೋ ಅದೃಷ್ಟ ನನಗಿರಲಿಲ್ಲ. ಈ ವಿಷಯ ಬೇರೆಯವರಿಗೆ ಗೊತ್ತಾದ್ರೆ ಎಲ್ಲ ನನ್ನ ತಿರಸ್ಕಾರವಾಗಿ ಕಾಣುತ್ತಾರೋ, ಅವಹೇಳನ
ಮಾಡಿ ನಗುತ್ತಾರೋ ಅಂತ ಹೆದರಿ ನಾನು ಯಾರಿಗೂ ವಿಷಯ ತಿಳಿಸದೆ ಮದ್ವೆ ಅಂದ್ರೆನೇ ನಂಗೆ ಆಸಕ್ತಿ ಇಲ್ಲಾ ಅಂತ ನಟಿಸಿದೆ. ಅದ್ರೆ ನಿನ್ನ ಮಾತ್ರ ನಿಜವಾಗಿ ಪ್ರೀತಿಸಿದೆ. ನಿನ್ನ ಬಾಳು ಸುಖವಾಗಿರಬೇಕು ಅಂತನೇ ನಾನು ನಿನ್ನ ಪ್ರೀತಿನಾ ತಿರಸ್ಕರಿಸಿದೆ. ನಿನ್ನ ಪ್ರೀತಿ ಅಲ್ಲಾ ಬೇರೆ ಯಾರ ಪ್ರೀತಿನೂ ಒಪ್ಪಿಕೊಳ್ಳಲಾರದ ಸ್ಥಿತಿ ನನ್ನದು. ಇದು ನನ್ನ ದುರದೃಷ್ಟ. ನೀನು ನಿನ್ನ ಹ್ಯಾಂಗೋವರಿನಿಂದ ಹೊರ ಬಾ. ಈ ಬದುಕನ್ನ ಒಪ್ಪಿಕೊಂಡು ಬಿಟ್ಟಿದ್ದೇನೆ. ಒಳ್ಳೆ ಹೆಂಡತಿ ಮುದ್ದಾದ ಮಗು ಪಡೆದಿರೋ ಅದೃಷ್ಟವಂತ ನೀನು, ನನ್ನ ಒಂಟಿತನಕ್ಕೆ ನೀನು ಕಾರಣ, ಅಲ್ಲಾ ಅದನ್ನ ಮರೆತು ಬಿಡು.”

ತನ್ನ ರಾಗಳ ಎದೆಯೊಳಗೆ ಈ ಘೋರ ದುರಂತದ ಅಗ್ನಿಪರ್ವತ ಉರಿಯುತ್ತಿದೆಯೇ, ತನ್ನ ರಾಗ ಅಗ್ನಿಕನ್ಯೆ, ಅಯ್ಯೋ ರಾಗ ಅವನೆದೆ ನೋವಿನಿಂದ ಹಿಂಡಿತು.

ರಾಗ ತಪ್ಪು ಮಾಡಿದೆ ನೀನು, ನೀನು ಹೇಗಿದ್ರೂ ನಿನ್ನ ಒಪ್ಪಿಕೊಳ್ಳುವ ಸ್ಥಿತಿಯಲ್ಲಿದ್ದೆ. ಒಂದೇ ಒಂದು ಮಾತು ಹೇಳಿದ್ರೂ ಸಾಕಾಗಿತ್ತು. ಈ ಹೃದಯದಲ್ಲಿಟ್ಟು ಪೂಜಿಸುತ್ತಾ ಇದ್ದೆ. ನೀನು ಹೆಜ್ಜೆ ಇಟ್ಟ ಕಡೆ ಹೂ ಹಾಸಿ ನೀ ನಲುಗದಂತೆ ಬಾಳಿಸುತ್ತಿದ್ದೆ. ತಪ್ಪು ಮಾಡಿಬಿಟ್ಟೆ ರಾಗ ನೀನು ಹಲುಬಿದ.

“ನೀನೆಂಥ ಉದಾರ ಮನಸ್ಸಿನವನು ಅಭಿ, ನಿನ್ನಂಥ ಮನಸ್ಸು ಎಲ್ಲರಿಗೂ ಇರುವುದಿಲ್ಲ. ಕಾಲ ಮಿಂಚಿ ಹೋಗಿದೆ. ಈಗ ಏನೂ ಹೇಳಿದ್ರೂ ಎರಡು ಪ್ಲಸ್
ಎರಡು ನಾಲ್ಕೇ ಆಗುವುದು ಅಭಿ. ನೀನು ನನ್ನ ಪ್ರೀತಿಸಿದ್ದೆ ಅನ್ನೋ ನೆನಪಿನಲ್ಲೇ ನಾನು ಇನ್ನುಳಿದ ದಿನಗಳನ್ನು ಕಳೆದುಬಿಡುತ್ತೇನೆ. ನೀನು ನಿನ್ನ ಆಲೋಚನೆಗಳನ್ನೆಲ್ಲ ಬಿಟ್ಟು ನಿನ್ನ ಸಂಸಾರದ ಜೊತೆ ಚೆನ್ನಾಗಿರಬೇಕು.”

‘ಅದಕ್ಕೊಂದು ಕಂಡಿಷನ್ ಇದೆ.’ ತೂರಿ ಬಂದ ಧ್ವನಿಯತ್ತ ಇಬ್ಬರೂ ತಿರುಗಿದರು. ಅಂಬರ ಹತ್ತಿರ ಬರುತ್ತಾ, “ನನ್ನ ಕ್ಷಮ್ಸಿ, ನಾನೆಲ್ಲ ಕೇಳಿಸಿಕೊಂಡೆ, ಮಾಡದೆ ಇರೋ ತಪ್ಪಿಗೆ ಇಡೀ ಜೀವನ ಶಿಕ್ಷೆ ಅನುಭವಿಸುತ್ತಾ ಇದ್ದೀರಿ. ಅಭಿಯ ನೆನಪೊಂದೇ ಸಾಕೇ ಈ ಬದುಕಿಗೆ? ಅವನ ಅಂಶ ನನ್ನ ಹೊಟ್ಟೆಯಲ್ಲಿ ಬೆಳಿತಾ ಇದೆ. ಇನ್ನಾರು ತಿಂಗಳಿಗೆ ಪುಟ್ಟ ಅಭಿ ಬರ್ತಾನೆ. ಅವನು ಬರೋದು ಸೀದಾ ನಿಮ್ಮ ಮಡಿಲಿಗೆ. ಇದಕ್ಕೆ ಒಪ್ಪಿಕೊಂಡರೆ ಮಾತ್ರ ಅಭಿ ನಮ್ಮ ಜೊತೆ ಸಂತೋಷವಾಗಿ ಇರ್ತಾರೆ” ಎಂದಳು ಯಾವ ಏರಿಳಿತವೂ ಇಲ್ಲದೆ. ಕಣ್ಣರಳಿಸಿ ಅವಳನ್ನು ನೋಡಿದ ರಾಗ ನಂಬದಾದಳು. ಅಭಿ ಮಗು ನನ್ನ ಮಡಿಲಿನಲ್ಲಾ, ನಾನು ತಾಯ್ತನ ಅನುಭವಿಸುತ್ತೇನಾ? ಪುಟ್ಟ ಅಭಿ ನನ್ನ ಅಮ್ಮ ಅನ್ನುತ್ತಾ, ಓಹ್ ಅಂಬರ ಥ್ಯಾಂಕ್ಸ್, ಥ್ಯಾಂಕ್ಸ್ ಅಂಬರ ಮಾತಿನಲ್ಲಿ ಹೇಳಲಾರದ ನೂರಾರು ಭಾವಗಳು ಉಕ್ಕಿ ಅವಳ ಕೈ ಹಿಡಿದು ಬಿಕ್ಕಳಿಸಿದಳು.

“ಅಂಬರ, ರಿಯಲಿ ಯೂ ಆರ್ ಗ್ರೇಟ್”, ಹೆಮ್ಮೆಯಿಂದ ಅಭಿಜ್ಞಾ ಅಂಬರಳನ್ನು ತೋಳಿನಲ್ಲಿ ಬಳಸಿ ಬೆನ್ನು ತಟ್ಟಿದ.

“ನಾವು ಬೀದರಿಗೆ ಅಂತ ಹೊರಟಾಗ ನೀನು ಇಲ್ಲಿ ಸಿಕ್ತಿಯಾ ಅನ್ನೋ ಕಲ್ಪನೆ ಕೂಡ ನನಗಿರಲಿಲ್ಲ. ನೀನೆಲ್ಲೋ ಗಂಡ ಮಕ್ಕಳ ಜೊತೆ ನೆಮ್ಮದಿಯಾಗಿದ್ದಿಯಾ ಅಂತನೇ ನಂಬಿದ್ದೆ. ನನ್ನ ಪ್ರೀತಿ ನಿಂಗೆ ಬೇಡವಾಗಿತ್ತೇನೋ ಅನ್ನೋ ನೋವು ಮನದ ಮೂಲೆಯಲಿ ಕಾಡ್ತಾ ಇತ್ತು. ಈಗ ಅವರೆಡರ ಸ್ಥಳ ಅದಲು ಬದಲಾಗಿವೆ. ನೀನು ಒಂಟಿ ಅನ್ನೋ ನೋವು, ನನ್ನ ಪ್ರೀತಿಯಲ್ಲಿ ನೀನಿನ್ನೂ ಇದ್ದಿಯಾ ಅನ್ನೋ ನೆಮ್ಮದಿ ಎನಿಸಿದರೂ…..” ಮಾತನಾಡಲಾರದೆ ಭಾವುಕನಾದ.

“ಬೇಡ ಅಭಿ ಭಾವುಕನಾಗಬೇಡ, ನಾನು ಇನ್ನು ಮೇಲೆ ಸುಖ ಸಂತೋಷದಲ್ಲಿ ತೇಲಾಡ್ತಿನಿ. ನಿನ್ನ ಮಗುವಿಗೆ ತಾಯಿ ಆಗ್ತಿನಿ, ನಾನು ಕಟ್ಟಿಕೊಂಡಿದ್ದ ಕೋಟೆಯಿಂದ
ಹೊರ ಬರ್ತೀನಿ, ನಾನು ಎಲ್ಲರಂತೆ ಬದುಕ್ತೀನಿ ಅಭಿ ನಿನ್ನ ಅಂಬರನ ಋಣ ನಾ ಹೇಗೆ ತೀರಿಸಲಿ ಅಭಿ. ಬರಡಾಗಿದ್ದ ನನ್ನ ಬದುಕಿನಲ್ಲೂ ಹಸಿರ ಸಿರಿ ಕಾಣುತ್ತೆ. ಆ ಹಸಿರಿನಲ್ಲಿ ತಂಪಾಗಿತೀನಿ” ಪ್ರೀತಿ ಪ್ರೇಮದ ಕೋಟೆಯೊಳಗಿನ ನದಿಯಾದಳು ರಾಗ.
*****
ಪುಸ್ತಕ: ದರ್ಪಣ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೧೧೬
Next post ಅಜೀರ್ಣ

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

cheap jordans|wholesale air max|wholesale jordans|wholesale jewelry|wholesale jerseys